ರಾಮರಸ ವಿರೂಪಾಕ್ಷ
	ಸು. 1538. ಹರಿಶ್ಚಂದ್ರ ಸಾಂಗತ್ಯ ಎಂಬ ಕೃತಿಯ ಕರ್ತೃ. ಇವನ ತಂದೆ ರಾಮರಸ. ಕವಿಯ ಬಗ್ಗೆ ಉಳಿದ ಯಾವುದೇ ವಿಷಯ ತಿಳಿದು ಬರುವುದಿಲ್ಲ.
  	ಹರಿಶ್ಚಂದ್ರಸಾಂಗತ್ಯದಲ್ಲಿ 13 ಸಂಧಿಗಳೂ 619 ಪದ್ಯಗಳು ಇವೆ. ರಾಘವಾಂಕನ ಹರಿಶ್ಚಂದ್ರಕಾವ್ಯ ಈ ಕೃತಿಗೆ ಆಕರ. ಕಥೆ, ಸಂವಿಧಾನ, ಪಾತ್ರಸೃಷ್ಠಿ, ಸನ್ನಿವೇಶಕಲ್ಪನೆ, ದರ್ಶನ ಎಲ್ಲವೂ ರಾಘವಾಂಕನಿಂದ ಬಂದವು. ವಿರೂಪಾಕ್ಷನ ಕೆಲಸವೇನಿದ್ದರೂ ರಾಘವಾಂಕ ಹಾಕಿಕೊಟ್ಟ ಚೌಕಟ್ಟಿನಲ್ಲೇ, ಅದರೂ ಇವನ ಕೃತಿ ಹರಿಶ್ಚಂದ್ರಕಾವ್ಯದ ನೆರಳಲ್ಲ. ವರ್ಣನೆಗಳಲ್ಲಿ ಇವನು ಎಷ್ಟೋ ಕಡೆ ರಾಘವಾಂಕನಿಂದ ಬೇರೆಯಾಗಿದ್ದಾನೆ. ಮೂಲಕಥೆಯನ್ನು ಸ್ವಲ್ಪಮಟ್ಟಿಗೆ ಪುಷ್ಠಿಗೊಳಿಸಿರುವುದೂ ಉಂಟು. ಇವನ ಸ್ವತಂತ್ರ ಪ್ರತಿಭೆಯ ಕಿಡಿಗಳು ಕಾವ್ಯದಲ್ಲಿ ಅಲ್ಲಲ್ಲಿ ಕಂಡುಬರುತ್ತವೆ. ಇವನ ಸಾಂಗತ್ಯದಲ್ಲಿ ಒಂದು ವೈಶಿಷ್ಯವಿದೆ. ಪ್ರತಿಯೊಂದು ಪದ್ಯದ ಒಂದು ಮತ್ತು ಮೂರನೆಯ ಪಾದಗಳಲ್ಲಿ ಒಳಪ್ರಾಸ ನಿಯತವಾಗಿದೆ. ರಾಘವಾಂಕನ ಷಟ್ಪದಿ ಕಾವ್ಯವನ್ನು ಸರಳವಾಗಿ ಸಾಂಗತ್ಯದಲ್ಲಿ ನಿರೂಪಿಸಿದ ನಾಲ್ವರು ಕವಿಗಳಲ್ಲಿ ವಿರೂಪಾಕ್ಷನಿಗೆ ಗಮನಾರ್ಹವಾದ ಸ್ಥಾನವಿದೆ. 							

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ